ನಮ್ಮ ಸಂಸ್ಥೆ
ನಮ್ಮ ಹೆಮ್ಮೆ

ಇತಿಹಾಸ

 ರಾಷ್ಟ್ರಕೂಟರು ಕ್ರಿ. ಶ. ೭೦೦ ರಿಂದ ೧೦೦೦ದ ವರೆಗೆ ಕನ್ನಡನಾಡನ್ನು ಆಳಿದ ಪ್ರಮುಖ ರಾಜಮನೆತನ. ರಾಷ್ಟ್ರಕೂಟರ ಪ್ರಮುಖ ದೊರೆ ಒಂದನೇ ಅಮೋಘವರ್ಷ. ಇವನ ಆಳ್ವಿಕೆಯ ಕಾಲ ಕ್ರಿ. ಶ. ೮೧೪ ರಿಂದ ೮೭೪. ಇವನು ‘ನೃಪತುಂಗ’ ‘ವೀರನಾರಾಯಣ’ ಮತ್ತು ‘ಅತಿಶಯಧವಳ’ ಎಂಬ ಮೂರು ಬಿರುದುಗಳನ್ನು ಧರಿಸಿದ್ದನು. ಇವನ ಆಳ್ವಿಕೆಯ ಕಾಲದಲ್ಲಿ ಇವನ ಆಸ್ಥಾನ ಕವಿ ಶ್ರೀವಿಜಯ ಎಂಬುವವನು “ಕವಿರಾಜಮಾರ್ಗ” ಎಂಬ ಗ್ರಂಥವನ್ನು ರಚಿಸಿದನು. ಇದು ಕನ್ನಡಭಾಷೆಯಲ್ಲಿ ಕಾಣಿಸಿಕೊಂಡಿರುವ ಪ್ರಪ್ರಥಮ ಗ್ರಂಥ. ಇದರಲ್ಲಿ ಕಾವೇರಿಯಿಂದ ಗೋದಾವರಿ ನದಿಯವರೆಗೆ ಕನ್ನಡನಾಡು ಹಬ್ಬಿತ್ತೆಂದೂ, ಕನ್ನಡಿಗರು ಚತುರರೆಂದೂ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್,  ಕನ್ನಡಿಗರ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾನೆ. ಕನ್ನಡದ ದೇಸಿ ಬಗ್ಗೆ, ಹಿಂದೆ ಇದ್ದ ಕನ್ನಡ ಕವಿ ಕಾವ್ಯಗಳ ಬಗ್ಗೆ ಸಾಕಷ್ಟು ಮಾಹಿತಿ ಈ ಗ್ರಂಥದಲ್ಲಿದೆ. ಕನ್ನಡನಾಡಿನ ಭೌಗೋಳಿಕ ಸರಹದ್ದು ಈ ಗ್ರಂಥದಲ್ಲಿ ಪ್ರಥಮ ಬಾರಿಗೆ ಗುರುತಿಸಲ್ಪಟ್ಟಿದೆ. ಈ ಎಲ್ಲದಕ್ಕೆ ಕಾರಣಕರ್ತ ಒಂದನೇ ಅಮೋಘವರ್ಷ. ಹಾಗಾಗಿ ಕನ್ನಡಿಗರು ಅಭಿಮಾನದಿಂದ ಇವನಿಗೆ ಇದ್ದ ಬಿರುದುಗಳಲ್ಲಿ ಒಂದಾದ “ನೃಪತುಂಗ” ಎಂಬುದನ್ನೇ ಮುಂದುಮಾಡಿ ಅವನ ಹೆಸರಿಗೆ ಅನ್ವರ್ಥಗೊಳಿಸಿ ಅಭಿಮಾನದಿಂದ ಸ್ಮರಿಸಿಕೊಳ್ಳುವುದು ವಾಡಿಕೆಯಲ್ಲಿದೆ. ಈ ಕಾರಣಕ್ಕೆ ನಮ್ಮ ಸಂಸ್ಥೆ ‘ನೃಪತುಂಗ’ನ ಹೆಸರಿನಡಿಯಲ್ಲೇ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದೆ.

ನಮ್ಮ ಬೆಳವಣಿಗೆಯ ಹಾದಿ

ಸ್ಥಾಪನೆ : ೧೯೮೯

ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ.

ಇದು ೧೯೮೦ ರ ದಶಕದಲ್ಲಿ ಮಾತೃಭಾಷೆ / ಪ್ರಾದೇಶಿಕ ಭಾಷೆಗಳು ಆಶ್ರಯದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಕನ್ನಡ ಕಾರ್ಯಕರ್ತರು ಮೈಸೂರಿನಲ್ಲಿ ಸ್ಥಾಪಿಸಿದ ಟ್ರಸ್ಟ್. ಪ್ರಾರಂಭವಾದ ವರ್ಷ ೧೯೮೯.

ನೃಪತುಂಗ ಕನ್ನಡ ಮಾಧ್ಯಮ ಉನ್ನತ ಪ್ರಾಥಮಿಕ ಶಾಲೆ

ನಂತರ ೧೯೯೦ರಲ್ಲಿ ಟ್ರಸ್ಟ್ ವತಿಯಿಂದ ನೃಪತುಂಗ ಕನ್ನಡ ಮಾಧ್ಯಮ ಶಾಲೆ ಆರಂಭ. ಇದು ಸಂಪೂರ್ಣ ಕನ್ನಡ ಮಾಧ್ಯಮ ಶಾಲೆ. ಒಂದನೇ ವರ್ಷ ಒಂದನೇ ತರಗತಿ ಪ್ರಾರಂಭ. ನಂತರ ಒಂದೊಂದು ವರ್ಷ ಒಂದೊಂದು ತರಗತಿ ಹೆಚ್ಚಳ. ೨೦೦೧ನೆ ಇಸವಿಯಲ್ಲಿ ಎಸ್. ಎಸ್. ಎಲ್.ಸಿ. ಮೊದಲ ತಂಡ ತೇರ್ಗಡೆ. ಭಾಷೆಯಾಗಿ ಇಂಗ್ಲಿಷ್ ಮಾತುಗಾರಿಕೆ, ಸ್ಮಾರ್ಟ್ ಕ್ಲಾಸ್, ಯೋಗ, ಗಣಕ ತರಬೇತಿ ಸೌಲಭ್ಯ.

ನೃಪತುಂಗ ಕನ್ನಡ ಮಾಧ್ಯಮ ಪ್ರೌಢಶಾಲೆ

೧೯೯೭ – ೯೮ ರಲ್ಲಿ ನೃಪತುಂಗ ಕನ್ನಡ ಮಾಧ್ಯಮ ಪ್ರೌಢಶಾಲೆಯು ಆರಂಭವಾಯಿತು. ಭಾಷೆಯಾಗಿ ಇಂಗ್ಲಿಷ್ ಮಾತುಗಾರಿಕೆ, ಸ್ಮಾರ್ಟ್ ಕ್ಲಾಸ್, ಯೋಗ, ಗಣಕ ತರಬೇತಿ ಸೌಲಭ್ಯ. ಸಂಸ್ಥೆ ಹೊಂದಿರುವ ಸಾಮಾಜಿಕ ಕಳಕಳಿಯಿಂದಾಗಿ ಪ್ರಸ್ತುತ ಓದುತ್ತಿರುವ೩೦೦ಮಕ್ಕಳಲ್ಲಿ೧೭೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ “ಓದಿಗೆಆಸರೆ” ಮತ್ತು “ಓದಿಗೆಆಸರೆಗೆಸಾರಿಗೆ”ಪ್ರಾಯೋಜಕತ್ವ ಎಂಬ ಸಾರ್ವಜನಿಕ ದೇಣಿಗೆಯ ಮೂಲಕ ಉಚಿತ ಶಿಕ್ಷಣ

ನೃಪತುಂಗ ಕನ್ನಡ ಮಾಧ್ಯಮ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು

೨೦೧೯- ೨೦ರಲ್ಲಿ ನೃಪತುಂಗ ಕನ್ನಡ ಮಾಧ್ಯಮ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಆರಂಭವಾಯಿತು. ಪ್ರಥಮ ಬಾರಿಗೆ ರಾಜ್ಯದಲ್ಲಿ ಕನ್ನಡಮಾಧ್ಯಮದಲ್ಲಿ ವಿಜ್ಞಾನದ ವಿಷಯಗಳು ಬೋಧಿಸುವ ಏಕೈಕ ಹಾಗೂ ಪ್ರಥಮ (ವಂತಿಗೆರಹಿತ / ಡೊನೇಶನ್ ಇಲ್ಲದ) ಕಾಲೇಜು. ಕನ್ನಡದಲ್ಲಿ ವಾಣಿಜ್ಯದ ವಿಷಯಗಳು ವಿಷಯಗಳ ಕಲಿಕೆಗೂ ಅವಕಾಶ.

ವಿಜ್ಞಾನದ ವಿಷಯಗಳು

ಕನ್ನಡದಲ್ಲಿ ವಿಜ್ಞಾನ ವಿಷಯಗಳ ಕಲಿಕೆಗೆ ಅವಕಾಶ.

ಕಲಿಸುವ ವಿಷಯಗಳು : ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ, ಜೀವವಿಜ್ಞಾನ / ಗಣಕವಿಜ್ಞಾನ (ಕಂಪ್ಯೂಟರ್ ಸೈನ್ಸ್).

ವಾಣಿಜ್ಯದ ವಿಷಯಗಳು

ಕನ್ನಡದಲ್ಲಿ ವಾಣಿಜ್ಯದ ವಿಷಯಗಳ ಕಲಿಕೆಗೂ ಅವಕಾಶ.

ಎಲ್ಲಾ ವಿದ್ಯಾರ್ಥಿಗಳಿಗೂ ಸರಕಾರಿ ಕಾಲೇಜಿಗೆ ಸಮಾನವಾದ (ಹೆಚ್ಚುಕಡಿಮೆ ಉಚಿತ ಎನ್ನಬಹುದಾದ) ಶುಲ್ಕ.

ಕಲಿಸುವ ವಿಷಯಗಳು : ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ,ಲೆಕ್ಕಶಾಸ್ತ್ರ, ಗಣಕ ವಿಜ್ಞಾನ (ಕಂಪ್ಯೂಟರ್ ಸೈನ್ಸ್).

ಮೂಲಸೌಕರ್ಯ

ಭವ್ಯ ಕಟ್ಟಡ, ಸುಸಜ್ಜಿತ ತರಗತಿಗಳು ಹಾಗೂ ಸುಸಜ್ಜಿತ ವಿಜ್ಞಾನದ ಪ್ರಯೋಗಾಲಯಗಳು, ಕ್ರೀಡಾ ಮೈದಾನ. ಆಧುನಿಕ ೪೦ ಗಣಕಗಳಿರುವ ಸುಸಜ್ಜಿತ ಪ್ರಯೋಗಾಲಯ.

ನೃಪತುಂಗ ಸಾಂಸ್ಕೃತಿಕ ವೇದಿಕೆ

ಸಂಸ್ಥೆಯು  “ನೃಪತುಂಗ ಚಿಂತನ ಕಟ್ಟೆ” ಎಂಬ ಹೆಸರಿನಡಿಯಲ್ಲಿ ಅಭಿಪ್ರಾಯಗಳ ವಿನಿಮಯಕ್ಕಾಗಿ  ೫೦ ಆಸನಗಳ ಮೀಸಲಿಟ್ಟ ಸ್ಥಳವನ್ನು ಹೊಂದಿದೆ ಮತ್ತು ಎಲ್ಲದಕ್ಕೂ ಅಗ್ರಸ್ಥಾನದಲ್ಲಿ, ಕನ್ನಡ ಸಂಸ್ಕೃತಿಯನ್ನು ಎತ್ತಿಹಿಡಿಯಲು ಮತ್ತು ಕಲೆಯನ್ನು ಪ್ರೋತ್ಸಾಹಿಸಲು ೩೫೦ ಆಸನಗಳ “ರಮಾಗೋವಿಂದ ರಂಗಮಂದಿರ” ಎಂಬ ತಾಂತ್ರಿಕವಾಗಿ ಅತ್ಯಂತ ಸುಸಜ್ಜಿತವಾದ ರಂಗಮಂದಿರವನ್ನು ಹೊಂದಿದೆ.

ಕನ್ನಡವಿಕಾಸ ವಿದ್ಯಾಸಂಸ್ಥೆ ಧರ್ಮದರ್ಶಿಮಂಡಳಿ ಆರಂಭ(೧೯೮೯)

ಬಾಡಿಗೆ ಕಟ್ಟಡದಲ್ಲಿ ನೃಪತುಂಗ ಕನ್ನಡ ಪ್ರಾಥಮಿಕ ಶಾಲೆ ಆರಂಭ(1990)
ನೂತನ ಸ್ವಂತ ಕಟ್ಟಡಕ್ಕೆ ಶಂಕು ಸ್ಥಾಪನೆ(24-9-2000) ಕನ್ನಡದ ಹೋರಾಟಗಾರ ಸಾಹಿತಿ ಡಾ.ಎಂ ಚಿದಾನಂದ ಮೂರ್ತಿ ಅವರಿಂದ.

ನೂತನ ಕಟ್ಟಡ ನೃಪತುಂಗ ಕನ್ನಡ ಶಾಲಾ ಸಂಕೀರ್ಣದ ಉದ್ಘಾಟನೆ(3 ಏಪ್ರಿಲ್2005)ಉಪಮುಖ್ಯಮಂತ್ರಿ ಶ್ರೀಸಿದ್ಧರಾಮಯ್ಯ ಅವರಿಂದ

ನೃಪತುಂಗ ಪದವಿ ಪೂರ್ವ ಕನ್ನಡ ವಿಜ್ಙಾನ ಮತ್ತು ವಾಣಿಜ್ಯ ಕಾಲೇಜಿನ ಕಟ್ಟಡದ ಶಂಕು ಸ್ಥಾಪನೆ ಶ್ರೀ ರಾಜಶೇಖರ ಕೋಟಿ ಅವರಿಂದ

ಕಾಲೇಜಿನ ಪ್ರಯೋಗಾಲಯಗಳ ಚಿತ್ರಗಳು