
ಸ್ವಾಗತ
ಅಂದು ೧೯೮೦ರ ದಶಕ. ಗೋಕಾಕ್ ಚಳುವಳಿ ಕನ್ನಡ ಭಾಷೆಯ ಉಳಿವಿಗಾಗಿ ನಡೆದ ಹೋರಾಟ. ಕೋಟ್ಯಾಂತರ ಜನ ಕನ್ನಡಿಗರು ಕನ್ನಡಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ನಡೆಸಿದ ಆಂದೋಲನ. ಇದರಿಂದ ಪ್ರೇರಣೆಗೊಂಡ ಮೈಸೂರಿನ ಕೆಲವು ಕನ್ನಡ ಕಾರ್ಯಕರ್ತರು ಮತ್ತು ಅಧ್ಯಾಪಕರು ಒಂದುಗೂಡಿ ಕನ್ನಡಮಾಧ್ಯಮದಲ್ಲಿ ಕಲಿಸುವ ಪ್ರತಿಷ್ಠಿತ ಗುಣಮಟ್ಟದ ಶಾಲೆಯನ್ನು ಸ್ಥಾಪಿಸುವ ನಿರ್ಧಾರವನ್ನು ಕೈಗೊಂಡರು. ಅದರ ಫಲವಾಗಿ ಉಗಮಿಸಿದ ಶಾಲೆಯೇ 'ನೃಪತುಂಗ ಕನ್ನಡ ಶಾಲೆ’.
ಇದು ೧೯೮೯ರಲ್ಲಿ ನೋಂದಾಯಿತವಾದ ಕನ್ನಡವಿಕಾಸ ವಿದ್ಯಾಸಂಸ್ಥೆಯ ಶಿಶು. ಕನ್ನಡ ಮಾತೃಭಾಷೆಯಲ್ಲಿ ಉನ್ನತ ಗುಣಮಟ್ಟದ ಶಿಕ್ಷಣವನ್ನು ಯಾವುದೇ ಹೆಚ್ಚಿನ ವಂತಿಕೆಯನ್ನು ಪಡೆಯದೆ ಒದಗಿಸುವ ಉದ್ದೇಶ ಸಂಸ್ಥೆಯದು. ಇದಕ್ಕೆ ಕೈಜೋಡಿಸಿದವರೆಲ್ಲರೂ ಕನ್ನಡವನ್ನು ಪ್ರೀತಿಸುವ ಮನಸ್ಸುಗಳು.
ಶಿಕ್ಷಣವೇ ಶಕ್ತಿ: ಸ್ವಾತಂತ್ರ್ಯದ ಅನಂತರ ಈ ಶಕ್ತಿಯನ್ನು ಸಮಾಜದ ಎಲ್ಲ ವರ್ಗಗಳಿಗೂ ನೀಡಲು ಶಿಕ್ಷಣ ಸೌಲಭ್ಯಗಳನ್ನು ದೇಶದಾದ್ಯಂತ ವಿಸ್ತರಿಸಲಾಯಿತು. ಅದೇ ಉದ್ದೇಶದಿಂದ ದೇಶಭಾಷೆಗಳಲ್ಲಿ ಶಿಕ್ಷಣವನ್ನು ನೀಡುವ ಪ್ರಕ್ರಿಯೆ ಪ್ರಾರಂಭವಾಯಿತು. ಆದರೆ ಎಂಬತ್ತರ ದಶಕದಲ್ಲಿ ಶಿಕ್ಷಣವು ವ್ಯಾಪಾರೀಕರಣದ ದಾರಿಯನ್ನು ಹಿಡಿಯತೊಡಗಿತು. ಸರಕಾರಗಳು ಶಿಕ್ಷಣವನ್ನು ಖಾಸಗಿವಲಯಕ್ಕೆ ತೆರೆದುದರಿಂದ ವಿದ್ಯೆ ಮಾರಾಟದ ಸರಕಾಗಿ ಮಾರ್ಪಾಡಾಗುತ್ತಾ ಹೋಯಿತು. ಪ್ರಾರಂಭದಲ್ಲಿ ಇದು ಉನ್ನತಶಿಕ್ಷಣಕ್ಕೆ ಸೀಮಿತವಾಗಿದ್ದರೂ ಕ್ರಮೇಣ ಶಾಲಾಶಿಕ್ಷಣಕ್ಕೂ ವಿಸ್ತರಿಸಿತು. ಇದಕ್ಕೆ ಇನ್ನೊಂದು ಕಾರಣ ಶಾಲಾ ಶಿಕ್ಷಣವನ್ನು ಆಕ್ರಮಿಸುತ್ತಾ ಹೋದ ಆಂಗ್ಲಮಾಧ್ಯಮ. ನಗರಪ್ರದೇಶಗಳಲ್ಲಿ ಹೆಚ್ಚುತ್ತಾ ಹೋದ ಆಂಗ್ಲಮಾಧ್ಯಮ ಶಾಲೆಗಳು ಸಾರ್ವಜನಿಕರನ್ನು ಶೋಷಿಸುವುದರ ಜೊತೆಗೆ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಕೊಡಲಿಪೆಟ್ಟು ಹಾಕತೊಡಗಿದವು ಮತ್ತು ನಾಡನುಡಿಯಾದ ಕನ್ನಡಕ್ಕೆ ಮಾರಕವಾಗತೊಡಗಿದವು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಪ್ರಾರಂಭವಾದದ್ದೇ ನೃಪತುಂಗ ಕನ್ನಡ ಶಾಲೆ. ರಾಮಕೃಷ್ಣನಗರದ ಬಾಡಿಗೆ ಮನೆಯಲ್ಲಿ ಒಂದನೇ ತರಗತಿಯಿಂದ ಪ್ರಾರಂಭಿಸಿ ಹಂತ ಹಂತವಾಗಿ ಒಂದೊಂದೇ ತರಗತಿಗಳನ್ನು ಪ್ರಾರಂಭಿಸುತ್ತಾ ೨೦೦೦ದ ಇಸವಿಯಲ್ಲಿ ಮೊದಲ ಎಸ್.ಎಸ್.ಎಲ್.ಸಿ. ತಂಡ ಹೊರಬಂದಿತು. ೨೦೦೩ರಲ್ಲಿ ರಾಮಕೃಷ್ಣನಗರದಲ್ಲೇ ಈಗಿನ ಸ್ವಂತ ಕಟ್ಟಡದಲ್ಲಿ ತರಗತಿಗಳು ಪ್ರಾರಂಭವಾದವು. ೨೦೧೯ರಲ್ಲಿ ಕನ್ನಡ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಪ್ರಾರಂಭವಾಯಿತು .
ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ನಮ್ಮ ಟ್ರಸ್ಟಿನ ಹೆಸರನ್ನು ೨೦೦೦ ದಲ್ಲಿ “ಕನ್ನಡವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ“ ಎಂದು ಬದಲಾಯಿಸಲಾಯಿತು. ೨೦೧೬ ರಲ್ಲಿ ಸಂಸ್ಥೆಯ ಬೆಳ್ಳಿ ಮಹೋತ್ಸವವನ್ನು ಆಚರಿಸಲಾಯಿತು. ಅದರ ಅಂಗವಾಗಿ ನೆಲ, ಜಲ, ಭಾಷೆಗೆ, ಸಂಬಂಧಿಸಿದಂತೆ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಜೊತೆಗೆ ನೆಲ ಜಲ ಭಾಷೆಗೆ ಸಂಬಂಧಿಸಿದಂತೆ ಗಣ್ಯರ ಲೇಖನಗಳನ್ನೊಳಗೊಂಡ ‘ನೃಪತುಂಗ-೨೫’ ಎಂಬ ಸ್ಮರಣಸಂಚಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು. ೨೦೧೬ರಲ್ಲಿ ಬೆಳ್ಳಿ ಹಬ್ಬವನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಈ ಸಂಸ್ಥೆಯ ಫಲಾನುಭವಿಗಳು ಬಹುತೇಕ ಸಮಾಜದ ಅವಕಾಶವಂಚಿತ ಜನರೇ ಆಗಿದ್ದಾರೆ. ಹಾಗಾಗಿ ನಮ್ಮಲ್ಲಿ ಓದುತ್ತಿರುವ ಬಹುತೇಕ ಎಲ್ಲಾ ವಿದ್ಯಾರ್ಥಿಗಳಿಗೂ ನಾವು ಈವರೆಗೂ ಯಾವುದೇ ವಂತಿಕೆಯನ್ನು ಪಡೆದಿಲ್ಲ. ಸಮಾಜದ ಕನ್ನಡದ ಮನಸ್ಸುಗಳ ಸಹೃದಯರೊಂದಿಗೆ ಮನವಿ ಮಾಡಿ ‘ಓದಿಗೆ ಆಸರೆ’ ಎಂಬ ದತ್ತು ಯೋಜನೆಯ ೪೦೦೦/- +೪೦೦೦/- ರೂಗಳನ್ನು, ಸಾರಿಗೆ ಯೋಜನೆಗೆ ೧೦೦೦/- ರೂಗಳನ್ನು ಪಡೆದುಕೊಂಡು ಕಲೆ ಸಂಸ್ಕ್ರತಿಯನ್ನು ಸಮೃದ್ಧಗೊಳಿಸುವ ನೆಲೆಯಲ್ಲಿ ಕನ್ನಡ ವಿಕಾಸ ವಿದ್ಯಾ ಸಂಸ್ಥೆ ರಮಾಗೋವಿಂದ ರಂಗಮಂದಿರವನ್ನು ೨೦೨೦ ರಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಅವಕಾಶವಂಚಿತ ಬಡಮಕ್ಕಳಿಗೆ ಆಸರೆಯಾಗಿ ಅವರನ್ನು ಸುಶಿಕ್ಷಿತರನ್ನಾಗಿಸುತ್ತಿದ್ದೇವೆ.
ನಮ್ಮ ಸಂಸ್ಥೆಯ ಗುರಿ
ಧ್ಯೇಯ
ತಾಯ್ನುಡಿಯಾದ ಕನ್ನಡಭಾಷೆಯಲ್ಲಿ ಮೂಲಶಿಕ್ಷಣವನ್ನು ನೀಡುವ ಮೂಲಕ ಪರಿಪೂರ್ಣ ವ್ಯಕ್ತಿತ್ವವಿಕಸನ ಮತ್ತು ಸಂವಹನ ಭಾಷೆಯಾಗಿ ಆಂಗ್ಲ ಭಾಷೆಯ ವಿಶೇಷ ಕಲಿಕೆ.
ದರ್ಶನ
ಸಮಾಜದ ಎಲ್ಲಾ ಸ್ತರದ ಜನರನ್ನೂ ಒಳಗೊಂಡ ನೆಲಮೂಲ ಸಂಸ್ಕೃತಿ, ಸಾಹಿತ್ಯ ಮತ್ತು ಶಿಕ್ಷಣವನ್ನು ಸಮೃದ್ಧಗೊಳಿಸುವುದು. ಸಮಾಜದ ಅಂಚಿನಲ್ಲಿರುವ ನಿರ್ಲಕ್ಷಿತ ಜನಾಂಗಕ್ಕೆ ಶಿಕ್ಷಣವನ್ನು ನೀಡುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವುದು. ಬೌದ್ಧಿಕ, ನೈತಿಕ ಮತ್ತು ವಿಚಾರಪರವಾದ ಸಮಗ್ರಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ನೀಡಿ ಉದ್ಯೋಗವನ್ನು ಗಳಿಸುವ ಸಬಲತೆಯನ್ನು ನೀಡುವುದು ಮತ್ತು ಜವಾಬ್ಧಾರಿಯುತ ಜನಾಂಗವನ್ನು ನಿರ್ಮಾಣ ಮಾಡುವುದು. ಬುದ್ಧಿವಂತ, ಸುಸಂಸ್ಕೃತ ಮತ್ತು ಸಾಮಾಜಿಕ ಬದ್ಧತೆಯ ಜನಾಂಗವನ್ನು ಬೆಳೆಸಿ ಸದೃಢ ಸಮಾಜವನ್ನು ಕಟ್ಟುವುದು. ಅರ್ಥಪೂರ್ಣ ಸಾಂಸ್ಕೃತಿಕ ಚಟುವಟಿಕೆಗೆ ನೆಲೆ ಒದಗಿಸುವುದು.
ಕನ್ನಡ ಮನಸ್ಸುಗಳಸಹಕಾರವೇ ಆಸರೆ
ಕೆಲವು ಕನ್ನಡ ಹೋರಾಟಗಾರರು ಮತ್ತು ಅಧ್ಯಾಪಕರುಗಳು ಕ್ರೋಢೀಕರಿಸಿದ ಅಲ್ಪ ಮೂಲಧನದೊಂದಿಗೆ ೧೯೮೯ರಂದು ಪ್ರಾರಂಭವಾದ ಈ ಸಂಸ್ಥೆಗೆ ಸಮಾಜದ ಎಲ್ಲಾ ಸ್ತರಗಳಿಂದಲೂ ಹಣ, ವಸ್ತು, ಪೀಠೋಪಕರಣಗಳ ರೂಪದಲ್ಲಿ ಸಹಕಾರ ಸಿಕ್ಕಿದೆ. ಸರಕಾರದಿಂದ ಬಂದ ಒಂದು ಕೋಟಿ ಅನುದಾನದಿಂದ ಪದವಿಪೂರ್ವ ಕಾಲೇಜಿನ ಕಟ್ಟಡದ ನಿರ್ಮಾಣವಾಗಿದೆ. ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುದಾನದಿಂದ ವಿಜ್ಞಾನವಿಭಾಗದ ಪ್ರಯೋಗಾಲಯಗಳು ಮತ್ತು ಗಣಕ ಪ್ರಯೋಗಾಲಯ ಸುಸಜ್ಜಿತವಾಗಿದೆ. ದೇಶದ ಹೊರಗಿನ ಕನ್ನಡದ ಕಳಕಳಿಯ ಮಹನೀಯರು ಮತ್ತು ಸಂಘ ಸಂಸ್ಥೆಗಳಿಂದಲೂ ಕೊಡುಗೆ ದೊರೆತಿದೆ. ನಮ್ಮ ಈ ಕನ್ನಡದ ಆದರ್ಶ ಯಾವತ್ತೂ ಜನಾಧಾರಿತ, ಜನರಿಂದಲೇ ಯಶಸ್ಸು ಕಾಣಬೇಕಾಗಿದೆ. ನಿಮ್ಮ ಔದಾರ್ಯವೇ ನಮ್ಮ ಸೋಪಾನ.
ಓದಿಗೆಆಸರೆಯೋಜನೆ
ಒಬ್ಬ ವಿದ್ಯಾರ್ಥಿಯ ೧ ವರ್ಷದ ಶೈಕ್ಷಣಿಕ ವೆಚ್ಚವನ್ನು ಪ್ರಾಯೋಜಕರಿಂದ ಪಡೆದು ಆ ವಿದ್ಯಾರ್ಥಿಗೆ ಒಂದು ವರ್ಷ ಪೂರ್ತಿ ಉಚಿತ ಶಿಕ್ಷಣ ನೀಡುವುದು. ಇದುವರೆಗೂ ಒಬ್ಬ ವಿದ್ಯಾರ್ಥಿಗೆ “ಓದಿಗೆ ಆಸರೆ” ಮೊತ್ತವಾಗಿ ಸ್ವೀಕರಿಸುತ್ತಿದ್ದ ನಾಲ್ಕು ಸಾವಿರ ರೂ. ಗಳು ಇಂದಿನ ಖರ್ಚು-ವೆಚ್ಚಗಳಿಗೆ ಸರಿತೂಗದೆ ಇರುವುದರಿಂದ ಎಂಟು ಸಾವಿರ ರೂ. ಗಳನ್ನು ಒಬ್ಬ ವಿದ್ಯಾರ್ಥಿಗೆ ಇಬ್ಬರು ಪ್ರಾಯೋಜಕರಿಂದ (ತಲಾ ನಾಲ್ಕು ಸಾವಿರದಂತೆ) ಸ್ವೀಕರಿಸಲು ಉದ್ದೇಶಿಸಿದ್ದೇವೆ. ಒಬ್ಬರೇ ಇಚ್ಚೆಪಟ್ಟಲ್ಲಿ ಎಂಟು ಸಾವಿರ ರೂ. ಗಳನ್ನು ನೀಡಬಹುದು.“ಓದಿಗೆ ಆಸರೆಗೆ ಸಾರಿಗೆ” ಪ್ರಾಯೋಜಕತ್ವಕ್ಕೆ ವರ್ಷಕ್ಕೆ ೧೦೦೦ ರೂಪಾಯಿ ದೇಣಿಗೆ ನೀಡಬಹುದು.



